ಪುಳಿಂದರು
ನರ್ಮದಾ ಕಣಿವೆಯ ಮೂಲನಿವಾಸಿಗಳು. ಐತರೇಯ ಬ್ರಾಹ್ಮಣರಲ್ಲಿ ಆಂಧ್ರರು, ಪುಳಿಂದರು, ಪುಂಡಾರರು, ಶಭರರು ಮತ್ತು ಮುತಿಬರನ್ನು ದಸ್ಯುಗಳೆಂದು ಅಥವಾ ಆರ್ಯೇತರ ಪಂಗಡಕ್ಕೆ ಸೇರಿದವರೆಂದು, ಇವರು ಆರ್ಯಾವರ್ತದ ಗಡಿಗಳಲ್ಲಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ. ದಕ್ಷಿಣದ ವಿಂಧ್ಯಪರ್ವತ ಶ್ರೇಣಿ ಮತ್ತು ನರ್ಮದಾ ಕಣಿವೆಗಳನ್ನು ಪರಿಯಾತ್ರವೆಂದು ಪರಿಗಣಿಸಲಾಗಿತ್ತು. ಅದು ಆರ್ಯಾವರ್ತದ ದಕ್ಷಿಣದ ಎಲ್ಲೆಯ ಪ್ರದೇಶವಾಗಿತ್ತು. ಪುಳಿಂದರು ಪೂರ್ವ ಮಾಳ್ವದಲ್ಲಿ ಮತ್ತು ಜಬ್ಬಲ್‍ಪುರ ಪ್ರದೇಶಗಳಲ್ಲಿ 6 ನೆಯ ಶತಮಾನದವರೆಗೆ ನೆಲೆಸಿದ್ದ ವಿಂಧ್ಯಪರ್ವತ ಬುಡಕಟ್ಟಿನವರೆಂದೂ ಹಾಗೂ ಪ್ರಾಚೀನ ಭಾರತದ ಲೋಹಯುಗ ಸಂಸ್ಕøತಿಯ ಜನರ ಪರಂಪರೆಗೆ ಸೇರಿದ ಮಿಶ್ರ ಬುಡುಕಟ್ಟಿನವರೆಂದು ಹೇಳಲಾಗಿದೆ. ಪುಳಿಂದರು ಇತರ ಬುಡಕಟ್ಟು ಜನಾಂಗದವರೊಡನೆ ಸೇರಿ ಪ್ರಬಲರಾಗಿ ಆಗಿಂದಾಗ್ಗೆ ಕೇಂದ್ರ ಆಡಳಿತದ ಮೇಲೆ ಬಂಡೇಳುತ್ತಿದ್ದರು.

	ಆರ್ಯ ಸಂಸ್ಕøತಿಯ ವಿಸ್ತರಣೆಯಿಂದಾಗಿ ದಕ್ಷಿಣ ಭಾರತದ ಕಡೆಗೆ ವಲಸೆ ಬಂದು ವಿಂಧ್ಯ ಪರ್ವತ ಪ್ರದೇಶದಲ್ಲಿ ನೆಲೆಯೂರಿದ ಈ ಮೂಲನಿವಾಸಿಗಳನ್ನು ಕುರಿತ ಉಲ್ಲೇಖ ಋಗ್ವೇದದ ಕಡೆಯ ಶ್ಲೋಕಗಳಲ್ಲೂ ಇದೆ. ಪುರಾಣಗಳಲ್ಲೂ ಇವರನ್ನು ನರ್ಮದಾ ಕಣಿವೆಯ ಮೂಲ ನಿವಾಸಿಗಳೆಂದೇ ಹೇಳಲಾಗಿದೆ. ಪ್ರಾಣಿಗಳ ಬೇಟೆ ಇವರಿಗೆ ಮುಖ್ಯ ಕಸುಬಾಗಿತ್ತು. ವ್ಯವಸಾಯದಲ್ಲಿ ಇವರು ಪ್ರಗತಿ ಹೊಂದಿರಲಿಲ್ಲ. ನೇಗಿಲ ಬಳಕೆ ಇವರಿಗೆ ತಿಳಿದಿರಲಿಲ್ಲ. ಇವರು ಪ್ರಾಣಿಗಳ ಚರ್ಮವನ್ನು ಉಡುಪಾಗಿ ಧರಿಸುತ್ತಿದ್ದರು. ಇವರು ಮದ್ಯ ಸೇವಿಸುತ್ತಿದ್ದರು. ದೇವತೆಗಳಿಗೆ ನರಬಲಿ ಕೊಡುವ ಪದ್ಧತಿ ಇವರಲ್ಲಿತ್ತೆಂದು ತಿಳಿದುಬಂದಿದೆ. 					  								(ಜಿ.ಆರ್.ಆರ್.)